ಜೊರಾಮಿ – ಒಂದು ವಿಮೋಚನೆಯ ಹಾಡು ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್ನನ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು ಬೆಸೆಯುತ್ತದೆ. ಈ ಕಥನವು ಮುಂದಕ್ಕೆ ಚಲಿಸಿದಂತೆ, ಕಮರಿ ಹೋಗಿರುವ ಮಿಜೋರಾಮ್ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆಗಳು ಶೋಧಗೊಳ್ಳುತ್ತವೆ. ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಈ ನಾಡು ಅಸ್ಸಾಮಿನ ಭಾಗವಾಗಿತ್ತು; ಆಗ ಅಸ್ಸಾಮ್ ರೈಫಲ್ಸ್ ಸಂಘಟನೆಯಿಂದ ಕಿರುಕುಳ ಅನುಭವಿಸಿತು. ಪ್ರತ್ಯೇಕ ರಾಜ್ಯವಾದಾಗ ರಕ್ಷಣೆಯ ಹೆಸರಿನಲ್ಲಿ ಭಾರತೀಯ ಸೈನ್ಯದಿಂದ ಮಾರಣ ಹೋಮಕ್ಕೆ ತುತ್ತಾಯಿತು. ಇದನ್ನೆಲ್ಲ ಎದುರಿಸಲು ಮಿಜೋರಾಮ್ನ ಒಳಗಡೆಯಿಂದ ಹುಟ್ಟಿಕೊಂಡ ಮಿಜೋ ನ್ಯಾಶನಲ್ ಫ್ರಂಟ್ ನಿಂದಲೂ ಒಂದಲ್ಲ ಒಂದು ಬಗೆಯಲ್ಲಿ ಹಿಂಸೆ ದೌರ್ಜನ್ಯಗಳಿಗೆ ಈಡಾಗಬೇಕಾಯಿತು. ಒಂದು ಸಮುದಾಯದ ಮೇಲಾದ ಗತಕಾಲದ ಗಾಯಗಳು ವರ್ತಮಾನದಲ್ಲಿಯೂ ಅವುಗಳಿಗೆ ಉಪ್ಪು ಸುರಿದು ಹೊತ್ತಿ ಉರಿಯುವಂತಾಗುವ ಸಂಕೀರ್ಣ ಆಯಾಮಗಳನ್ನು ಕಾದಂಬರಿಯು ಕಟ್ಟಿಕೊಡುತ್ತದೆ. – ಡಾ. ಸುಭಾಷ್ ರಾಜಮಾನೆ
