
ಕತೆಗಳು ಓದಿಸಿಕೊಂಡು ಹೋಗಬೇಕು. ಹಾಗೆಯೇ ಒಂದು ಒಳ್ಳೆಯ ನೀತಿಬೋಧೆ ಅಲ್ಲಿರಲೇಬೇಕು. ಅಲ್ಲದೆ ಸ್ವಾರಸ್ಯಕರ ನಿಲುವೊಂದು ಇರಬೇಕು. ಹೀಗಿದ್ದರೆ ಕತೆಗೆ ಒಂದು ಶೋಭೆ ಬರುತ್ತದೆ. ಕತೆಗಳಲ್ಲಿರುವ ಕಲ್ಲಿನಂಥ ಗಟ್ಟಿಯಾದ ಅಂಶವೊಂದು ನಮ್ಮ ಬುದ್ದಿಯನ್ನು ಬಡಿದೆಚ್ಚರಿಸಿ ಬಂಗಾರವಾಗಿಸಬೇಕು. ಇವೆಲ್ಲ ಇಲ್ಲಿನ ಕತೆಗಳಲ್ಲಿ ಧಾರಾಳವಾಗಿಯೇ ಇವೆ. ನಮ್ಮ ಅಲ್ಪಮತಿಗೆ ಒಂದಷ್ಟು ಚುರುಕುತನ ನೀಡಿ ನಮ್ಮನ್ನು ಸತ್ಪಜೆಗಳನ್ನಾಗಿ ರೂಪಿಸುವ ಶಕ್ತಿ ಈ ಕತೆಗಳಿಗಿದೆ. “ಕೆಟ್ಟ ಮಾತುಗಳಿಗೆ ಕೆಟ್ಟದಾಗಿ ಪ್ರತಿಕ್ರಿಯಿಸುವುದಾದರೆ ಒಳ್ಳೆಯ ಮಾತುಗಳಿಗೆ ಒಳ್ಳೆಯದಾದ ಪ್ರತಿಕ್ರಿಯೆ ಇರುವುದಲ್ಲವೇ?” ಎಂಬ ಮೊದಲ ಕತೆಯಲ್ಲಿನ ಮಾತೊಂದು ಮುಂದಿನ ಎಲ್ಲ ಕತೆಗಳಿಗೂ ಮುನ್ನುಡಿಯುತ್ತದೆ. ಲೇಖಕರಾದ ಶ್ರೀ ಜಿ. ಎಸ್. ಜಯದೇವ ಅವರು ತಾವು ಮಕ್ಕಳಿಗೆ ಹೇಳಿದ ಅಸಂಖ್ಯ ಕತೆಗಳಲ್ಲಿ ಕೆಲವನ್ನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ಎಳೆಯರಲ್ಲಿ ಸದ್ಗುಣಗಳನ್ನು ಎಳವೆಯಲ್ಲೇ ಬಿತ್ತಬೇಕಾಗಿರುವುದರಿಂದ ಮಕ್ಕಳಿಗೆ ಈ ಕತೆಗಳೆಲ್ಲ ಸ್ಫೂರ್ತಿ ನೀಡಬಲ್ಲವು.
